ಜಿಪ್ಸಿಗಳು 
	ರಾಷ್ಟ್ರರಹಿತ ಅಲೆಮಾರಿ ಜನ. ಇವರಿಗೆ ವಿವಿಧ ಹೆಸರುಗಳಿವೆಯಾಗಿ ಅವುಗಳ ಆಧಾರದ ಮೇಲೆ ಇವರ ಮೂಲನಿವಾಸವನ್ನು ನಿರ್ಧರಿಸಲಾಗುವುದಿಲ್ಲ. ಜಿಪ್ಸಿ ಎಂಬುದು ಈಜಿಪ್ಷನ್ ಪದದಿಂದ ಉದ್ಭವಿಸಿತೆಂಬ ನಂಬಿಕೆ. ಇಂಗ್ಲೆಂಡಿನಲ್ಲಿ ಮೊದಲು ಕಾಲಿಟ್ಟ ಜಿಪ್ಸಿಗಳ ಹೆಸರು ಕಿರಿಯ ಈಜಿಪ್ಟಿನ ಶ್ರೀಮಂತರು ಎಂದು. ಫ್ರೆಂಚರು ಇವರನ್ನು ಬೋಹೀಮೀಯನರು ಎಂದು ಕರೆದರು; ಸ್ಪೇನ್ ದೇಶದಲ್ಲಿ ಇವರ ಸಂಗೀತ ಹಾಗೂ ಕುಣಿತಗಳಿಗೆ ಫ್ಲೆಮಿಷ್ ಎಂಬ ಹೆಸರಿದೆ. ಸ್ವೀಡನ್‍ನಲ್ಲಿ ಇವರನ್ನು ಟಾರ್ಟರಿ ಜನರೆನ್ನುತ್ತಾರೆ. ನೆದರ್ಲೆಂಡ್ ಮತ್ತು ಜರ್ಮನಿಯಲ್ಲಿ ಹೀದನರು ಎಂಬ ಹೆಸರಿದೆ. ಅಮೆರಿಕದಲ್ಲಿ ಇವರು ಕಾರ್‍ಮೆನ್ (ಬಂಡಿಗಳಲ್ಲಿ ಸಂಚರಿಸುವ ಜನ). ಭಾರತದಲ್ಲಿ ಕತ್ತರಿ ಚಾಕು ಸೂಜಿ ಔಷಧ ಮೂಲಿಕೆಗಳು ಮೊದಲಾದುವನ್ನು ಮಾರತ್ತ ತಿರುಗುವ ಕಂದಾರಿ (ಖಾಂದಹಾರ್) ಜನ ಎಂದಿವರು ಪ್ರಸಿದ್ಧ. ಭಾಷಾ ಶಾಸ್ತ್ರೀಯ ಸಂಶೋಧನೆಗಳಿಂದ ಈ ಜನ ಭಾರತದ ನಿವಾಸಿಗಳಾಗಿದ್ದರೆಂದು ತಿಳಿಯಲಾಗಿದೆ. 

ಜಿಪ್ಸಿಗಳ ವಲಸೆ : ಜಿಪ್ಸಿ ಜನ ಭಾರತವನ್ನು ಎಂದು, ಏಕೆ ಬಿಟ್ಟು ಅಲೆಮಾರಿ ಜೀವನವನ್ನು ಪ್ರಾರಂಭಿಸಿದರೆಂಬುದಕ್ಕೆ ಮಾಹಿತಿಗಳಿಲ್ಲ. ಬಹುಶಃ ಇವರು ವಿವಿಧ ಕಾಲಗಳಲ್ಲಿ ಹಲವಾರು ತಂಡಗಳಲ್ಲಿ ವಲಸೆ ಹೊರಟಿರಬೇಕು. ಕ್ರಿ .ಶ. 1000ದಲ್ಲಿವರು ಪರ್ಷಿಯದಲ್ಲಿ ಕಾಣಿಸಿಕೊಂಡು ಅಲ್ಲಿ ಎರಡು ಶಾಖೆಗಳಾಗಿ ಬೇರ್ಪಟ್ಟರು: ಒಂದು ಶಾಖೆ ಉತ್ತರಕ್ಕೆ ಹೊರಟು ಯೂರೋಪ್ ಮತ್ತು ಬಾಲ್ಕನ್ ಪ್ರದೇಶಗಳಲ್ಲಿ ಸಂಚರಿಸಹತ್ತಿತು. ಕಾಲಕ್ರಮದಲ್ಲಿ ಈ ಜನ ಹಂಗರಿಗೆ ಹೊರಟರು. ಜರ್ಮನಿ ಹಾಗೂ ಬಲೋನ್ಶದಲ್ಲಿ ಕಾಣಿಸಿಕೊಂಡರು. 1427ರಲ್ಲಿ ಪ್ಯಾರಿಸ್ ನಗರದ ಬಳಿ ಬಿಡಾರ ಹಾಕಿದರು. ಆ ತರುವಾಯ ರಷ್ಯ ಪೋಲಂಡ್ ಇಂಗ್ಲೆಂಡ್‍ಗಳಲ್ಲಿ ಹರಡಿಕೊಂಡರು. 

	ಯೂರೋಪಿನಲ್ಲಿ ಮೊದಮೊದಲು ಕಾಣಿಸಿಕೊಂಡ ಜಿಪ್ಸಿಗಳು ತಾವು ತುರ್ಕಿ ನಾಸ್ತಿಕರ ಕ್ರೌರ್ಯದಿಂದ ತಪ್ಪಿಸಿಕೊಂಡು ಬಂದ ಕ್ರೈಸ್ತರೆಂದು ಹೇಳಿಕೊಂಡರು. ಸಾಮ್ರಾಟ ಸಿಗಿಸ್ಮಂಡ್, ಅವರ ಸುರಕ್ಷಿತ ಸಂಚಾರಕ್ಕೆ ಸನ್ನದುಗಳನ್ನು ನೀಡಿದ (1423). 1715ರಲ್ಲಿ 9 ಮಂದಿ ಸ್ಕಾಟ್ಲೆಂಡ್ ಜಿಪ್ಪಿಗಳನ್ನು ಅಮೆರಿಕದ ಹೊಸನೆಲೆಗೆ ಕಳುಹಿಸಲಾಯಿತು. ಕ್ರಮೇಣ ಈ ಜನ ಮೆಕ್ಸಿಕೊ ಹಾಗೂ ಆಸ್ಟ್ರೇಲಿಯಗಳಲ್ಲೂ ಹರಡಿದರು. 

ಪ್ರಪಂಚದ ಜಿಪ್ಸಿಗಳನ್ನು ಎರಡು ತಂಡಗಳಾಗಿ ವಿಂಗಡಿಸಬಹುದು. ಮೊದಲ ತಂಡದವರು ಜಿಪ್ಸಿ ಲಕ್ಷಣಗಳನ್ನು ಕಳೆದುಕೊಳ್ಳದೆ ನಿರ್ದಿಷ್ಟ ಸ್ಥಳಗಳಲ್ಲಿ ಅರೆನೆಲೆಸಿದಂತಿದ್ದಾರೆ. ಮತ್ತೊಂದು ತಂಡದವರು ಬೇರೆ ದೇಶಗಳಿಂದ ಹಠಾತ್ತನೆ ಬಂದು, ವಿದೇಶಿಗಳಂತೆ ಇದ್ದಾರೆ. ಅರೆನೆಲೆಸಿದವರು ಸ್ಥಳೀಯ ಜನರ ಹೆಸರುಗಳನ್ನೇ ಇಟ್ಟುಕೊಳ್ಳುತ್ತಾರೆ. ಅಮೆರಿಕಕ್ಕೆ ವಲಸೆ ಹೋದ ಜಿಪ್ಸಿ ಜನ ಬಹುಕಾಲ ಇಂಗ್ಲೆಂಡಿನಲ್ಲಿದ್ದವರು. ಬಾಸ್‍ವೆಲ್, ಕೂಪರ್, ಸ್ಟ್ಯಾನ್‍ಲಿ, ವೆಲ್ಸ್ ಇತ್ಯಾದಿ ಹೆಸರುಗಳು ಅಮೆರಿಕ ಇಂಗ್ಲೆಂಡ್ ಎರಡು ರಾಷ್ಟ್ರಗಳಲ್ಲೂ ಇವೆ. ಸೆರ್ವಾಂಟೆeóï, ಜಾರ್ಜ್ ಬಾರೊ, ಆಲಿವರ್ ಗೋಲ್ಡ್‍ಸ್ಮಿತ್ ಮೊದಲಾದ ಲೇಖಕರು ಜಿಪ್ಸಿಗಳನ್ನು ಬರೆದಿದ್ದಾರೆ. 

	ಬಹಿಷ್ಕಾರ : ಎಲ್ಲ ರಾಷ್ಟ್ರಗಳಲ್ಲೂ ಜಿಪ್ಸಿಜನ ಬಹಿಷ್ಕøತರಾಗಿದ್ದಾರೆ. ಯೂರೋಪಿನಲ್ಲಿ ಅವರನ್ನು ಗುಲಾಮರನ್ನಾಗಿ ಪರಿಗಣಿಸಿದ್ದರು. ಕ್ರೂರಹಿಂಸೆ, ಮರಣದಂಡನೆ ಅವರಿಗೆ ಕಾದಿಟ್ಟ ಬುತ್ತಿಯಾಗಿತ್ತು. 18ನೆಯ ಶತಮಾನದ ರೈನ್‍ಲ್ಯಾಂಡಿನಲ್ಲಿ ಕೈಗೂಸನ್ನು ಹೊತ್ತಿದ್ದ ಜಿಪ್ಸಿ ಹೆಂಗಸರನ್ನು ಮೃಗದಂತೆ ಬೇಟೆಯಾಡಿದ್ದಾರೆ. 1701 ಮತ್ತು 1750 ನಡುವೆ ಜಿಪ್ಸಿಗಳನ್ನು ಬಹಿಷ್ಕರಿಸಲು 65 ರಾಜಶಾಸನಗಳು ಹೊರಟವು. 16ನೆಯ ಶತಮಾನದ ಇಂಗ್ಲೆಂಡಿನಲ್ಲಿ ಜಿಪ್ಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಪಾತಕವೆಂದು ತಿಳಿಯಲಾಗಿತ್ತು. ಅದಕ್ಕೆ ಶಿಕ್ಷೆ ವಿಚಾರಣೆಯಿಲ್ಲದೆ ಮರಣದಂಡನೆ ಹಾಗೂ ಆಸ್ತಿಯ ಮುಟ್ಟುಗೋಲು. 1819ರಲ್ಲಿ ಜಿಪ್ಸಿಗಳಂತೆ ಉಡುಪು ತೊಟ್ಟು ತಿರುಗುತ್ತಿದ್ದವರಿಗೆ ಇಂಗ್ಲೆಂಡಿನ ನಾರ್‍ಫೋಕ್ ಜಿಲ್ಲೆಯಲ್ಲಿ ಚಡಿ ಶಿಕ್ಷೆ ವಿಧಿಸಿದ್ದಾರೆ. 20ನೆಯ ಶತಮಾನದಲ್ಲಿ ಪೂರ್ವ ಯೂರೋಪಿನ ಅನೇಕ ಜಿಪ್ಸಿಗಳು ಹಿಟ್ಲರನ ಆದೇಶದಂತೆ ನಾಶಹೊಂದಿದರು. ಹೀಗೆ ನಾಶಹೊಂದಿದವರು ಪ್ರಪಂಚದ ಜಿಪ್ಸಿ ಸಂಖ್ಯೆಯಲ್ಲಿ 10%. ಎಷ್ಟೇ ಕಷ್ಟಗಳಿಗೆ ಹಾಗೂ ಬಹಿಷ್ಕಾರಗಳಿಗೆ ತುತ್ತಾದರೂ ಈ ಜನ ಜೀವಿತವನ್ನು ನಸುನಗುತ್ತ ಸಾಗಿಸುತ್ತಿದ್ದಾರೆ. ಸಮಾಜದ ಕ್ರೌರ್ಯವನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲ.

ಇತ್ತೀಚೆಗೆ ಜಿಪ್ಸಿಗಳ ಬಗ್ಗೆ ಸಮಾಜ ಕಠಿಣವಾಗಿ ವರ್ತಿಸುತ್ತಿಲ್ಲ. ಆದಾಗ್ಯೂ ಆಕ್ರಮಣ, ಕಳ್ಳತನ ಇಂಥ ಆಪಾದನೆಗಳು ಇವರಿಗೆ ತಪ್ಪಿದ್ದಲ್ಲ. ಇಂದಿಗೂ ಇಂಗ್ಲೆಂಡಿನಲ್ಲಿ ಜಿಪ್ಸಿಜನ ಮನೆಗಳ ಹತ್ತಿರ ಡೇರೆ ಹಾಕಿಕೊಳ್ಳಬಾರದು, ಗ್ರಾಮ ಸಮೀಪದ ತೊರೆಗಳಿಂದ ನೀರು ಪಡೆಯಬಾರದು; ರಸ್ತೆಗಳ ಹತ್ತಿರ ಬೆಂಕಿ ಹೊತ್ತಿಸಿ ಅಡುಗೆ ಮಾಡಬಾರದು ಎಂಬ ನಿಷೇಧಗಳಿವೆ. ಹಿಂದೆ ಜಿಪ್ಸಿಗಳಿದ್ದ ಸ್ಥಳಗಳನ್ನು ಸಹ ಇತರ ಜನ ಉಪಯೋಗಿಸುವುದಿಲ್ಲ.

	ಜಿಪ್ಸಿಗಳ ಸ್ವಭಾವ ಮತ್ತು ಸಮಾಜ: ಇವರ ಮೈಬಣ್ಣ ಸಾಮಾನ್ಯವಾಗಿ ಕಪ್ಪು. ಕೊಳಕುಜನ. ಸುಳ್ಳರು. ಸಮಾಜ ವಿಧಿಸುತ್ತಿದ್ದ ಶಿಕ್ಷೆ ಮತ್ತು ಭೀತಿ ಇವರ ವಂಚಕ ಬುದ್ಧಿಗೆ ಕಾರಣವೆನ್ನಬಹುದು. ಅನೇಕರ ಜೀವನೋಪಾಯ ಭಿಕ್ಷಾಟನೆ, ಕಳ್ಳತನ. ನಂಬಿಕೆ ಹುಟ್ಟಿಸಿ ಮೋಸಮಾಡುವ ಪ್ರವೃತ್ತಿಯಲ್ಲಿ ಮೋಸಗಳ್ಳತನದಲ್ಲಿ ಇವರದು ಎತ್ತಿದ ಕೈ. ಆಧುನಿಕ ನೈತಿಕ ನಿಯಮಗಳಿಗೆ ದೂರವಿದ್ದರೂ ಇವರು ಅಂಥ ನೀತಿಬಾಹಿರರಲ್ಲ. ತಮಗಿಂತ ಬಡವರಾದವರಿಂದ ಕಸಿಯುವುದು ಇವರಲ್ಲಿ ಪಾಪಕರ. ಹಾಗೆಯೇ ಅಗತ್ಯವಸ್ತುವಿನ ಚೋರಿ ಅಪರಾಧವಲ್ಲ. ಯೇಸುವನ್ನು ಶಿಲುಬೆಗೆ ಹಾಕಿದ ಕಾಲದಲ್ಲಿ ಆತನ ಕೈಕಾಲುಗಳಿಗೆ ಹೊಡೆಯಬೇಕಾಗಿದ್ದ ನಾಲ್ಕು ಮೊಳೆಗಳಲ್ಲಿ ಒಂದನ್ನು ಜಿಪ್ಸಿಜನ ಅಪಹರಿಸಿದ ಕಾರಣ ಒಂದು ಪಾದಕ್ಕೆ ಮೊಳೆ ಸಾಲದಾಗಲಾಗಿ ಯೇಸುವಿನಯಾತನೆ ಅಷ್ಟರ ಮಟ್ಟಿಗೆ ಕಡಿಮೆಯಾಯಿತೆಂಬುದು ಜಿಪ್ಸಿಗಳಲ್ಲಿರುವ ಐತಿಹ್ಯಗಳಲ್ಲೊಂದು. ರೊಮ್ಯಾನೊ ಕ್ರಿಸ್ ಇವರ ನ್ಯಾಯಾಲಯ. ಮರಣದಂಡನೆ ಇವರಲ್ಲಿಲ್ಲ. ಬಣದಿಂದ ಹೊರಗೆ ಹಾಕುವುದೇ ಪರಮಾವಧಿ ಶಿಕ್ಷೆ. ಇವರ ಅಪರಾಧಗಳು ಮಾನವಕುಲಕ್ಕೆ ಅನುಗುಣವಾದವು; ಇವರ ಸದ್ಗುಣಗಳಾದರೋ ಇವರಿಗೆ ಮಾತ್ರ ವಿಶಿಷ್ಟವಾದವು.

	ಈ ಜನ ಹಟಮಾರಿಗಳು. ಇವರಲ್ಲಿ ಮೂಢನಂಬಿಕೆಗಳಿವೆ. ಮಂತ್ರ, ಶಾಪ, ತಾಯಿತ ಮೊದಲಾದವುಗಳಲ್ಲಿ ನಂಬಿಕೆ ಹೆಚ್ಚು. ಭವಿಷ್ಯ ಹೇಳುವ ಕಸಬು ಹೆಂಗಸರದು. ಗಂಡಸರು ಮುಂಗೋಪಿಗಳು. ಹೆಂಗಸರಿಗೆ ಬಾಯಿ ದೊಡ್ಡದು. ಇಷ್ಟಾದರೂ ಅವರು ಸುಶೀಲೆಯರು; ಮಕ್ಕಳನ್ನು ಹೆಚ್ಚಾಗಿ ಮುದ್ದು ಮಾಡುತ್ತಾರೆ. ಸ್ತ್ರೀ ಪುರುಷರಿಬ್ಬರಿಗೂ ಬಣ್ಣಬಣ್ಣದ ಉಡುಗೆ-ತೊಡುಗೆ ಇಷ್ಟ. ವಾಸ್ತವಿಕವಾಗಿ ಈ ಜನರದ್ದು ಸರಳ ಮನಸ್ಸು. ಇವರದು ಹಾಸ್ಯಪ್ರವೃತ್ತಿ; ಅತಿಥಿಸತ್ಕಾರದಲ್ಲಿ ಇನ್ನಿಲ್ಲದ ಆಸಕ್ತಿ. ಬಯಲು ಜೀವನದಿಂದ ಎಲ್ಲರೂ ಸಾಮಾನ್ಯವಾಗಿ ಆರೋಗ್ಯವಂತರಾಗಿರುವರು. 

ಜಿಪ್ಸಿಗಳ ಸ್ಥಾನಮಾನ ಹಾಗೂ ಆರ್ಥಿಕ ಪರಿಸ್ಥಿತಿ ಅವರು ಸಂಚರಿಸುವ ದೇಶದ ಮಟ್ಟಕ್ಕಿಂತ ಕಡಿಮೆ. ಮನೆ, ಗುಡಿಸಲು, ಕೆಲವೆಡೆ ಸ್ಪೇನಿನಲ್ಲಿ ಗುಹೆಗಳಲ್ಲಿ ವಾಸಿಸುವುದು ಕಂಡುಬಂದರೂ ಬಹುಮಟ್ಟಿಗೆ ಇವರದು ಅಲೆಮಾರಿ ಜೀವನ. ಬಣ್ಣ ಬಳಿದ ಗಾಡಿಗಳಲ್ಲಿ ಸಂಚರಿಸುತ್ತಾರೆ. ಅನುಕೂಲವಂತರು ಟ್ರೇಲರ್ ಹಿಂಗಾಡಿಗಳ ಸಮೇತವಾದ ಮೊಟಾರುಗಳಲ್ಲಿ ತಿರುಗುತ್ತಾರೆ. ಉಳಿದವರ ಜೀವನ ಡೇರೆಗಳಲ್ಲಿ.
ಜಿಪ್ಸಿಗಳ ಅಡುಗೆ ಬಯಲಲ್ಲಿ ನಡೆಯುತ್ತದೆ. ಅಪಹರಿಸಿದ ಕೋಳಿ, ಷಿಕಾರಿಮಾಡಿದ ಪಕ್ಷಿ, ತರಕಾರಿ ಇವರ ಆಹಾರ. ಯೂರೋಪಿನವರಿಗೆ ಮುಳ್ಳುಹಂದಿ ಮಾಂಸ ಬಹಳ ಪ್ರಿಯ. ನಾಗರಿಕ ದೇಶಗಳಲ್ಲಿನ ಈ ಜನ ಡಬ್ಬದ ಆಹಾರವನ್ನು ಬಳಸುತ್ತಾರೆ. ಹೊಗೆಸೊಪ್ಪು ಹಾಗೂ ಮದ್ಯಸೇವನೆ ಉಂಟು. ಅನ್ನ ಬಿಟ್ಟರೂ ಹೊಗೆಸೊಪ್ಪು ಬಿಡರು.

ಈ ಜನರ ವಿವಾಹಪದ್ಧತಿ ಸ್ಥಳದಿಂದ ಸ್ಥಳಕ್ಕೆ ಭಿನ್ನ. ಸತ್ತವರ ವಸ್ತುಗಳನ್ನು ಸುಟ್ಟುಹಾಕುತ್ತಾರೆ; ಅವರಿಗೆ ಸೇರಿದ ಕುದುರೆ ಮೊದಲಾದ ಪ್ರಾಣಿಗಳನ್ನು ಕೊಂದುಹಾಕುತ್ತಾರೆ. ಶವಸಂಸ್ಕಾರ ಭಾರತೀಯರಲ್ಲಿರುವಂತೆಯೆ. ನೆಲೆನಿಂತ ಸ್ಥಳದ ಧರ್ಮವನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಕ್ಯಾತೊಲಿಕ್, ಪ್ರಾಟೆಸ್ಟಂಟ್ ಹಾಗೂ ಮುಸಲ್ಮಾನ ಜನರಿದ್ದಾರೆ. ಇವರದು ಮಾತೃಪ್ರಧಾನ ಸಮಾಜ. ಚಂದ್ರನನ್ನು ಆರಾಧಿಸುತ್ತಾರೆ. ಕುಟುಂಬದಲ್ಲಿ ಹೆಂಗಸರ ಪ್ರಭಾವ ಅಧಿಕ. ತಂಡದ ನಾಯಕಿಗೆ ಪುರಿ ದಾಯ್ ಎಂದು ಹೆಸರು. ಆಕೆ ಬಣದ ಶಿಸ್ತಿಗೆ ಜವಾಬ್ದಾರಳು. ಅವಳೊಂದಿಗೆ ಬಣದ ನಾಯಕನೊಬ್ಬನಿರುತ್ತಾನೆ. ಬಣದ ಶಿಸ್ತು, ಕುಟುಂಬಪ್ರೇಮ ಇದ್ದರೂ ಇವರಲ್ಲಿ ಸಂಘಟನೆಯಿಲ್ಲ. ವರ್ಷಕ್ಕೊಮ್ಮೆ ಗೊತ್ತಾದ ನಗರಗಳಲ್ಲಿ ತಮ್ಮ ಸಂತರ ಪೂಜೆಗಾಗಿ ಒಟ್ಟು ಸೇರುತ್ತಾರೆ.

ಜಿಪ್ಸಿ ಭಾಷೆಯಲ್ಲಿ ಹಿಂದೂಸ್ಥಾನಿ, ಪ್ರಾಕೃತ ಹಾಗೂ ಸಂಸ್ಕøತ ಶಬ್ದಗಳಿವೆ. ಸಂಕೇತ ಭಾಷೆ ಪ್ರಧಾನ. ರಹಸ್ಯಗಳನ್ನು ಮಾತಾಡಿಕೊಳ್ಳಲು ಅದು ಸಹಾಯಕ (ನೋಡಿ- ಜಿಪ್ಸಿ-ಭಾಷೆ).

ಸುಧಾರಿತ ಜೀವನ: ಜಿಪ್ಸಿಗಳನ್ನು ಸಮಾಜದಲ್ಲಿ ವ್ಯವಸ್ಥಿತ ಜನರಾಗಿ ನೆಲೆಸುವಂತೆ ಮಾಡಲು ಪ್ರಯತ್ನಗಳಾಗಿವೆ. 1761ರಲ್ಲಿ ಆಸ್ಟ್ರಿಯದ ರಾಣಿ ಮೆರಿಯಾ ತೆರೀಸ ಜಿಪ್ಸಿಗಳು ಅಲೆಯಬಾರದು, ಡೇರೆಗಳಲ್ಲಿ ವಾಸಿಸಬಾರದು, ತಮ್ಮ ಭಾಷೆಯನ್ನಾಡಬಾರದು ಎಂಬ ಆಜ್ಞೆ ಹೊರಡಿಸಿದಳು. 18ನೆಯ ಶತಮಾನದಲ್ಲಿ ಸ್ಟೇನಿನ ರಾಜ 3ನೆಯ ಚಾರಲ್ಸ್ ಜಿಪ್ಸಿ ಮಕ್ಕಳನ್ನು ತಂದೆ ತಾಯಿಗಳಿಂದ ಬಿಡಿಸಿ ಕಡ್ಡಾಯ ಶಿಕ್ಷಣ ನೀಡಬೇಕೆಂದು ಆಜ್ಞಾಪಿಸಿದ. ಜಿಪ್ಸಿಗಳು ಸಹ ತಮ್ಮಲ್ಲಿಯೇ ವ್ಯವಸ್ಥಿತ ಸಮಾಜವನ್ನು ಸ್ಥಾಪಿಸಲು ಪ್ರಯತ್ನಸಿದ್ದಾರೆ. 1930ರಲ್ಲಿ ಕ್ವಿಕ್ ಬಣದ ಜಿಪ್ಸಿಗಳು ಪೋಲೆಂಡಿನಲ್ಲಿ ಒಂದು ಸಂತತಿಯನ್ನು ಸ್ಥಾಪಿಸಿದರು. ನ್ಯೂಯಾರ್ಕಿನಲ್ಲಿ ಸ್ಟೀವ್ ಕಸ್ಲೋವ್ ಎಂಬಾತ ರೆಡ್ ಡ್ರೆಸ್ ಜಿಪ್ಸೀಸ್ ಎಂಬ ಕೆಂಪು ವಸ್ತ್ರ ಜಿಪ್ಸಿಗಳ ವೃತ್ತಿಸಂಘವನ್ನು ಸ್ಥಾಪಿಸಿದ. ಇಂಥ ಪ್ರಯತ್ನಗಳೆಲ್ಲ ಅಷ್ಟು ಸಫಲವಾಗಿಲ್ಲ.

ಅಭಿವೃದ್ಧಿಗೊಂಡ ಆಧುನಿಕ ರಾಷ್ಟ್ರಗಳಲ್ಲಿ ಅಲೆಮಾರಿ ಜಿಪ್ಸಿಗಳು ಕಡಿಮೆಯಾಗುತ್ತಿದ್ದಾರೆ. ಯಾವುದಾದರೊಂದು ಕೆಲಸ ದೊರಕಿಸಿಕೊಂಡು ನೆಲೆಸುತ್ತಿದ್ದಾರೆ. ರಾಷ್ಟ್ರೀಯ ಗಡಿಗಳು, ಪಾಸ್‍ಪೋರ್ಟ್ ಅಗತ್ಯ ಮೊದಲಾದವು ಇದರ ಸಂಚಾರ ಪ್ರವೃತ್ತಿಗೆ ಅಡಚಣೆಗಳಾಗಿ ಇವರು ಒಂದೆಡೆ ನೆಲೆಸಲು ಸಹಾಯಕವಾಗಿವೆ. ಜಿಪ್ಸಿಜನರ ಶಿಕ್ಷಣಮಟ್ಟ ಕಡಿಮೆ. ಅಲೆಮಾರಿತನ ಇದಕ್ಕೆ ಕಾರಣ. ಹಲವರು ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಹಳೆಯ ಜಿಪ್ಸಿರಾಗಗಳು ಈಚೆಗೆ ನಶಿಸಿಹೋಗುತ್ತಿವೆ. ಈಗಿನ ಜಿಪ್ಸಿ ಸಂಗೀತದಲ್ಲಿ ಜಿಪ್ಸಿರಾಗಗಳ ಛಾಯೆ ಇದೆಯೆ ಎಂಬುದೇ ಸಂದೇಹಾಸ್ಪದ. ಇವರಲ್ಲಿ ಪಿಟೀಲು ಪಿಯಾನೋ ಜಾeóï ಸಂಗೀತಗಳಲ್ಲಿ ಪ್ರಸಿದ್ಧರಾದವರಿದ್ದಾರೆ. ಸ್ತ್ರೀಯರಲ್ಲಿ ಕಾರ್‍ಮೆನ್ ಅಮಯಳಂಥ ಪ್ರಸಿದ್ಧ ನರ್ತಕಿಯರಿದ್ದಾರೆ. ಗೂಳಿಕಾಳಗ ಮಾಡುವ ವೀರರು ಸ್ಪೇನಿನಲ್ಲಿ ಕಾಣಸಿಗುತ್ತಾರೆ. ಇಂಗ್ಲೆಂಡಿನ ಅನೇಕ ಬಾಕ್ಸಿಂಗ್ ಚಾಂಪಿಯನ್‍ಗಳು ಜಿಪ್ಸಿ ಬುಡಕಟ್ಟಿನವರು.
ಸೂಜಿ ತಯಾರಿಕೆ, ತೋಟಗಳಲ್ಲಿ ಹಣ್ಣುಕೀಳುವುದು, ಕುದುರೆ ವ್ಯಾಪಾರ, ಮೇದರ ಕೆಲಸ, ಬಾಚಣಿಗೆ ತಯಾರಿಕೆ, ಕಮ್ಮಾರವೃತ್ತಿ ಮೊದಲಾದವು ಇವರ ಕಸಬು. ಜಾತ್ರೆಗಳಲ್ಲಿ ದೊಂಬರಾಟ ಹಾಗೂ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಹೆಂಗಸರು ಕಣಿ ಹೇಳುತ್ತಾರೆ; ಸಣ್ಣ ಪುಟ್ಟ ಸಾಮಾನುಗಳನ್ನು ಮಾರುತ್ತಾರೆ.
(ವಿ.ಜಿ.ಕೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ